ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರೀ
1905-61. ಪ್ರಸಿದ್ಧ ಪಂಡಿತರು ನಾಟಕಕಾರರು. ಇವರದು ವಿದ್ವಾಂಸರ ಮನೆತನ. ಮೋಟಗಾನಹಳ್ಳಿ ಶಂಕರಶಾಸ್ತ್ರೀಗಳ (ನೋಡಿ- ಮೋಟಗಾನಹಳ್ಳಿ-ಶಂಕರಶಾಸ್ತ್ರೀ) ಮಕ್ಕಳಾದ ಇವರು ಬೆಂಗಳೂರಿನಲ್ಲಿ ಮಾಧ್ಯಮಿಕ ತನಕ ವ್ಯಾಸಂಗಮಾಡಿ ಪಾಂಡಿತ್ಯಗಳಿಸಿಕೊಂಡರು. ಸಾಹಿತ್ಯದ ಜೊತೆಗೆ ಸಂಗೀತದಲ್ಲೂ ಸಾಕಷ್ಟು ಪ್ರವೇಶ ಪಡೆದರು. ವಾಲ್ಮೀಕಿ ರಾಮಾಯಣವನ್ನು ಸುಶ್ರಾವ್ಯವಾಗಿ ವಾಚನ ಮಾಡುತ್ತಿದ್ದ ಇವರು ಉತ್ತಮ ಗಮಕಿಗಳು ಆಗಿದ್ದರು. ಬೆಂಗಳೂರಿನ ಸೇಂಟ್ ಥೆರೆಸಾ ಕಾನ್ವೆಂಟಿನಲ್ಲಿ 1943-61ರ ತನಕ ಕನ್ನಡ ಪಂಡಿತರಾಗಿ ಕೆಲಸ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಪತ್ರಿಕೆಗೆ ಕೆಲಕಲ ಸಂಪಾದಕರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಮಹತ್ತರ ಕೊಡುಗೆ ಎಂದರೆ ವಾಲ್ಮಿಕಿ ರಾಮಾಯಣವನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದು. ಈ ಕಾರ್ಯವನ್ನು 1930ರಲ್ಲಿ ಆರಂಭಿಸಿ 1938ರಲ್ಲಿ ಮುಗಿಸಿದರು. ಮೈಸೂರು ಅರಮನೆಯ ಶ್ರೀಜಯಚಾಮರಾಜೇಂದ್ರ ಗ್ರಂಥಮಾಲೆಯಲ್ಲಿ ಸ್ಕಂದಪುರಾಣವನ್ನು ಕನ್ನಡಕ್ಕೆ ತಂದಿದ್ದಾರೆ. ಇವರ ಕೃತಿಗಳಿವು: ಸ್ಕಂದ ಪುರಾಣ ಖಂಡಿಕೆಗಳು, ಲಲಿತೋಪಾಖ್ಯಾನ, ಸಂಸ್ಕøತ ನಾಟಕ ಕಥೆಗಳು (ಎರಡು ಭಾಗಗಳಲ್ಲಿ) ಮತ್ತು ಕರ್ಣಾಟಕ ಮಾಳವಿಕಾಗ್ನಿಮಿತ್ರ.

	ಮೈಸೂರು ಮಹಾರಾಜರು 1936ರಲ್ಲಿ ಶಾಸ್ತ್ರೀಗಳನ್ನು ಆಸ್ಥಾನ ವಿದ್ವಾಂಸರನ್ನಾಗಿ ಮಾಡಿ ಗೌರವಿಸಿದರು.

	ಶಾಸ್ತ್ರೀಗಳು ತಮ್ಮ 56ನೆಯ ವಯಸ್ಸಿನಲ್ಲಿ 30-7-1961 ರಂದು ನಿಧನ ಹೊಂದಿದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ